ಟೆರಿಲಿನ್
ಮನುಷ್ಯಕೃತ ಎಳೆಯೊಂದರ ವಾಣಿಜ್ಯನಾಮ. ಇದನ್ನು ಪಾಲಿ ಎಥಿಲೀನ್ ಟೆರಾಫ್‍ಥಲೇಟ್ ಬಹ್ವಂಗಿಯಿಂದ (ಪಾಲಿಮರ್) ತಯಾರಿಸುತ್ತಾರೆ. ಟೆರಿಟಾಲ್ ಮತ್ತು ಟೆರ್ಗಾಲ್ ಈ ಬಹ್ವಂಗಿಯಿಂದ ತಯಾರಿಸುವ ಇನ್ನಿತರ ಎರಡು ಎಳೆಗಳು.

	ತಯಾರಿಕೆ: ಟೆರಿಲಿನ್ ಎಂಬುದು ಸಂಶ್ಲೇಷಿತ ಉದ್ದವಾದ ಬಹ್ವಂಗೀ ಎಸ್ಟರು. ಇದನ್ನು ಯುನೈಟೆಡ್ ಕಿಂಗ್‍ಡಮ್ಮಿನ ಕ್ಯಾಲಿಕೋ ಪ್ರಿಂಟರ್ಸ್ ಅಸೋಸಿಯೇಷನ್ನಿನ ರಸಾಯನಶಾಸ್ತ್ರಜ್ಞರಾದ ಜೆ.ಆರ್.ವಿನ್‍ಫೀಲ್ಡ್ ಮತ್ತು ಜೆ.ಡಿ. ಡಿಕ್ಸನ್ ಎಂಬುವರು ಮೊದಲಿಗೆ ತಯಾರಿಸಿದರು. ಟೆರೀಫ್‍ಥ್ಯಾಲಿಕ್ ಆಮ್ಲವನ್ನು ಎಥಿಲೀನ್ ಗ್ಲೈಕಾಲಿನೊಡನೆ (ಆಲ್ಕೋಹಾಲ್) ವರ್ತಿಸುವುದರಿಂದ ಈ ಎಸ್ಟರು ಉಂಟಾಗುತ್ತದೆ. ಟೆರೀಫ್‍ಥ್ಯಾಲಿಕ್ ಆಮ್ಲದ ಡೈಮೀಥೈಲ್ ಎಸ್ಟರನ್ನು ಈ ಆಲ್ಕೋಹಾಲಿನೊಂದಿಗೆ ಬಹ್ವಂಗೀಕರಣಕ್ಕೆ ಒಳಪಡಿಸಿದಾಗ ಟೆರಿಲೀನ್ ದೊರೆಯುವುದು. ಇದರ ಅತಿ ಉದ್ದವಾದ ತಂತುನೂಲನ್ನು ಎರಡು ಬಗೆಯಲ್ಲಿ ತಯಾರಿಸುತ್ತಾರೆ: 1 ಉಡುಗೆ ತೊಡುಗೆಗಳಿಗಾಗಿ ಪ್ರಸಾಮಾನ್ಯ ದೃಢತೆಯುಳ್ಳ ನೂಲು ಒಂದು ಬಗೆ; 2 ಕೈಗಾರಿಕಾ ಉಪಯೋಗಗಳಿಗಾಗಿ ಅಧಿಕ ದೃಢತೆಯುಳ್ಳ ನೂಲು ಇನ್ನೊಂದು ಬಗೆ. ಪ್ರಸಾಮಾನ್ಯ ದೃಢತೆಯುಳ್ಳ ನೂಲಿಗೆ ಹೆಚ್ಚು ವಿಸ್ತರಣಶೀಲತೆ ಉಂಟು. ಅಧಿಕ ದೃಢತೆಯುಳ್ಳ ನೂಲಿಗೆ ಕಡಿಮೆ ವಿಸ್ತರಣಶೀಲತೆ ಇರುವುದು. ಪ್ರಸಾಮಾನ್ಯ ದೃಢತೆಯುಳ್ಳ ನೂಲನ್ನು ಎಳೆಯುವುದಕ್ಕಿಂತ ಹೆಚ್ಚಿಗೆ ಎಳೆದು ಅಧಿಕ ದೃಢತೆಯುಳ್ಳ ನೂಲನ್ನು ತಯಾರಿಸುವರು. ಅತಿ ಒರಟು ತಂತುನೂಲುಗಳನ್ನು ಶೈತ್ಯಮಾಧ್ಯಮದಲ್ಲಿ ಎಳೆಯುತ್ತಾರಾದರೆ ನಯತಂತು ನೂಲುಗಳನ್ನು ಎಳೆಯುವುದು ಉಷ್ಣಮಾಧ್ಯಮದಲ್ಲಿ. ಪ್ರಸಾಮಾನ್ಯ ದೃಢತೆಯುಳ್ಳ ನೂಲನ್ನು ಹೊಳಪು ಮತ್ತು ಮಸಕು ನಮೂನೆಗಳಲ್ಲಿ ಮಾಡಿದರೆ ಅಧಿಕ ದೃಢತೆಯುಳ್ಳ ನೂಲನ್ನು ಹೊಳಪು ನಮೂನೆಯಲ್ಲಿ ಮಾತ್ರ ಮಾಡುವರು. ಬಹ್ವಂಗೀ ದ್ರಾವಣಕ್ಕೆ ಕಡಿಮೆ ಶೇಕಡವಾರು ಪ್ರಮಾಣದಲ್ಲಿ ಟೈಟಾನಿಯಮ್ ಡೈ ಆಕ್ಸೈಡ್ ವರ್ಣದ್ರವ್ಯವನ್ನು ಸೇರಿಸುವುದರಿಂದ ಕಾಂತಿಯನ್ನು ಕಡಿಮೆಗೊಳಿಸಬಹುದು. ಟೆರಿಲೀನನ್ನು ಸ್ಟೇಪಲ್ ಎಳೆ ರೂಪದಲ್ಲಿ ತಯಾರಿಸುವರು. ಅತ್ಯಧಿಕ ಸಂಖ್ಯೆಯ ತಂತುಗಳನ್ನು ಮೊದಲು ನೂತು, ಹಗ್ಗತಂತೆ ಮಾಡಿಕೊಂಡು ಬಳಿಕ ಇದನ್ನು ಯಾಂತ್ರಿಕವಾಗಿ ಸೆಡೆತುಕೊಳ್ಳುವಂತೆ ಮಾಡುತ್ತಾರೆ. ಈ ಹಗ್ಗವನ್ನು ಉಷ್ಣಕ್ಕೆ ಒಳಪಡಿಸಿ ಬೇಕಾದ ಸ್ಟೇಪಲ್ ಉದ್ದಕ್ಕೆ ಕತ್ತರಿಸುತ್ತಾರೆ. ವುಸ್ರ್ಟೆಡ್, ಉಣ್ಣೆ, ಹತ್ತಿ, ಅಗಸೆನಾರು ಮೊದಲಾದುವುಗಳ ವ್ಯವಸ್ಥೆಗಳಿಗೆ ಅನ್ವಯವಾಗುವಂತೆ ಟರಿಲೀನ್ ಸ್ಟೇಪಲ್ ಎಳೆಗಳನ್ನು ಬೇರೆ ಬೇರೆ ಗಾತ್ರಗಳಲ್ಲೂ ಉದ್ದಗಳಲ್ಲೂ ತಯಾರಿಸಲಾಗುವುದು. ಉದಾಹರಣೆಗೆ ವುಸ್ರ್ಟೆಡ್ ವ್ಯವಸ್ಥೆಗೆ 3 ಡೆನಿಯರ್-4.5 ಸ್ಟೇಪಲ್ ಮತ್ತು 4 ಡೆನಿಯರ್-4.5" ಸ್ಟೇಪಲ್, ಉಣ್ಣೆಯ ವ್ಯವಸ್ಥೆಗೆ ಬೇಕಾಗುವ 3 ಡೆನಿಯರ್-2.5 ಸ್ಟೇಪಲ್-ಈ ಬಗೆಗಳಲ್ಲಿ ತಯಾರಿಸುತ್ತಾರೆ.

	ಗುಣಲಕ್ಷಣಗಳು: ಟೆರಿಲೀನ್ ಸಾಂದ್ರತೆ 1.38 ಗ್ರಾಮ್/ಸಿಸಿ. ಈ ಸಾಂದ್ರತೆ ನೈಲಾನಿನ ಸಾಂದ್ರತೆಗಿಂತ (1.14 ಗ್ರಾಮ್/ಸಿಸಿ.) ಅಧಿಕ. ಟೆರಿಲೀನ್ ನೈಲಾನಿಗಿಂತ ಹೆಚ್ಚು ನಯ. ಇನ್ನಿತರ ಗುಣಲಕ್ಷಣಗಳಲ್ಲಿ ಇದು ನೈಲಾನನ್ನು ಹೋಲುತ್ತದೆ. ಪತಂಗಗಳು ಮತ್ತು ಬ್ಯಾಕ್ಟೀರಿಯಗಳಿಗೆ ಇದು ನಿರೋಧಕ. ಬೂಷ್ಟಿನಿಂದ ಇದು ಬಾಧಿತವಾಗುವುದಿಲ್ಲ. ಹೆಚ್ಚು ಕಾಲ ಬಾಳಿಕೆ ಬರುವಂಥದೂ ಸವಕಳಿಯನ್ನು ತಡೆಹಿಡಿಯುವಂಥದ್ದೂ ಆಗಿದೆ. ಹೆಚ್ಚು ಕಾಲ ಬಿಸಿಲಿಗೆ ಒಡ್ಡಿದರೆ ತನ್ನ ಸಾಮಥ್ರ್ಯವನ್ನು ಸ್ವಲ್ಪ ಕಳೆದುಕೊಳ್ಳುವುದಾದರೂ ಬಣ್ಣ ಕಳೆದುಕೊಳ್ಳುವುದಿಲ್ಲ. ಈ ವಿಚಾರದಲ್ಲಿ ಇದು ನೈಲಾನಿಗಿಂತ ಉತ್ತಮ. ಒದ್ದೆಯಾಗಿರುವಾಗಿನ ಇದರ ತ್ರಾಣ ಹೆಚ್ಚುಕಡಿಮೆ ಒಣಗಿರುವಾಗಿನದರಷ್ಟೇ ಇರುತ್ತದೆ. ಅಧಿಕ ದೃಢತೆ ತಂತುನೂಲಿಗೆ ಸಂಬಂಧಿಸಿದ ಹಾಗೆ ಇದರ ಸಾಮಥ್ರ್ಯ (ಗ್ರಾಮ್/ಡೆನಿಯರ್) 6-7; ಪ್ರಸಾಮಾನ್ಯ ದೃಢತೆ ತಂತನೂಲಿಗೆ 4.5-5.5 ಮತ್ತು ಸ್ಟೇಪಲ್ ಎಳೆಗೆ 3.5-4.0. ತುಂಡರಿಯುವಷ್ಟರ ಮಟ್ಟಿನ ಲಂಬನೆಗೆ (ಶೇಕಡಾ ಪ್ರಮಾಣ) ಸಂಬಂಧಿಸಿದ ಹಾಗೆ ಇದರ ಸಂವಾದಿ ಸಂಖ್ಯೆಗಳು 12.5-7.5, 25-15 ಮತ್ತು 40-25. ಸ್ಟೇಪಲ್ ರೂಪದ ಟೆರಿಲೀನಿನ ಅಲ್ಪ ಸಾಮಥ್ರ್ಯ ಮತ್ತು ಹೆಚ್ಚು ತುಂಡರಿಯುವಷ್ಟರ ಮಟ್ಟಿನ ಲಂಬನೆಗಳಿಗೂ ಅತಿ ಉದ್ದವಾದ ತಂತುರೂಪದ ಅಧಿಕ ಸಾಮಥ್ರ್ಯ ಹಾಗು ಕಡಿಮೆ ತುಂಡರಿಯುವಷ್ಟರಮಟ್ಟಿನ ಲಂಬನೆಗಳಿಗೂ ವ್ಯತ್ಯಾಸಗಳುಂಟು. ಶಿಷ್ಟನಿಬಂಧನೆಗಳಿಗೆ (65% ಸಾಪೇಕ್ಷ ಆದ್ರ್ರತೆ ಮತ್ತು 750 ಛಿ ಉಷ್ಣತೆಗೆ, ಒಳಪಟ್ಟಂತೆ ಹೇಳುವುದಾದರೆ, ಟೆರೆಲೀನಿನ ಜಲಪ್ರಚೂಷತ್ವ (ವಾಟರ್‍ಅಬ್ ಸಾರ್ಬೆನ್ಸಿ) 0.4% ಮಾತ್ರ. ನೈಲಾನಿನದು 4.0% ರಿಂದ 4.5. ಸಾಪೇಕ್ಷ ಆದ್ರ್ರತೆ 95% ಮತ್ತು ಉಷ್ಣತೆ 700 ಛಿ ಇದ್ದಾಗಲು ಸಹ ಟೆರಿಲೀನಿನ ಜಲಪ್ರಚೂಷತ್ವ ಕೇವಲ 0.5% ಮಾತ್ರ. ನೈಲಾನಿನದು 6.1% ರಿಂದ 8.0% ಟೆರಿಲೀನಿನಲ್ಲಿನ ಅತಿ ಕಡಿಮೆ ತೇವಾಂಶ ಸ್ಥಿರ ವಿದ್ಯುದಾವೇಶಗಳಿಂದಾಗಿ ಸಂಸ್ಕರಣದ ಸಮಯದಲ್ಲಿ ಅಡ್ಡಿಗಳನ್ನು ಉಂಟು ಮಾಡುವುದಲ್ಲದೆ, ಟೆರಿಲೀನಿನಿಂದ ಮಾಡಿದ ಉಡುಪುಗಳನ್ನು ತೊಟ್ಟಾಗ ಇಂಥ ಆವೇಶಗಳನ್ನು ಪುನಃ ಉಂಟುಮಾಡಬಹುದು. ಈ ಆವೇಶಗಳು ವಾಯುವಿನಲ್ಲಿ ತೂರಾಡುವ ಮಣ್ಣಿನ ಕಣಗಳನ್ನು ಉಡುಪಿನತ್ತ ಆಕರ್ಷಿಸುತ್ತವೆ. ಟೇರಿಲೀನ್ ಉಡುಪಿನ ಕೊಳೆಯಾದ ಭಾಗಗಳನ್ನು ತೊಳೆಯುವುದು ಕಷ್ಟಸಾಧ್ಯ. ಚಾಚುವ, ಒತ್ತುವ, ಬಾಗುವ, ಮುರಿಯುವ ಗುಣಗಳಿರುವುದರಿಂದ ಟೆರಿಲೀನ್ ಎಳೆಗಳು ಚೆನ್ನಾಗಿ ಚೇತರಿಸಿಕೊಳ್ಳುತ್ತವೆ. ಮಡಿಕೆ, ಸುಕ್ಕುಗಳಿಂದ ಬಟ್ಟೆ ಬೇಗ ಹೊರತಾಗಿರುವಂತೆ ಮಾಡುವುದು ಈ ಲಕ್ಷಣಗಳೇ. ಬಹುತೇಕ ಒಣ ಚಲುವೆಕಾರಿಗಳು ಟೆರಿಲೀನನ್ನು ಬಾಧಿಸವು. ವಸ್ತ್ರವನ್ನು ಇಸ್ತ್ರಿಮಾಡುವ ಉಷ್ಣತೆ 1350 ಛಿ ಇರಬೇಕು; ಉಷ್ಣತೆ ಹೆಚ್ಚಾದರೆ (2050 ಛಿ) ಟೆರಿಲೀನನ ಎಳೆ ಇಸ್ತ್ರಿಪಟ್ಟಿಗೆಗೆ ಅಂಟಿಕೊಳ್ಳುವ ಸಾಧ್ಯತೆ ಉಂಟು. ಟೆರಿಲೀನ್ 2490 ಛಿ ಉಷ್ಣತೆಯಲ್ಲಿ ಕರಗುತ್ತದೆ. ಹೀಗಾಗಿ ಅದು ಹೆಚ್ಚು ಉಷ್ಣತೆಯನ್ನು ತಡೆದುಕೊಳ್ಳುವುದು ಸಾಧ್ಯ. ಟೆರಿಲೀನಿನ ವಿದ್ಯುತ್ ಹಾಗೂ ಯಾಂತ್ರಿಕ ಗುಣಧರ್ಮಗಳನ್ನು 1800 ಛಿ ವರೆಗೂ ಸ್ಥಾಪಿಸಬಹುದು. ಅಧಿಕ ಉಷ್ಣತೆಗಳಲ್ಲಿ ಟೆರಿಲೀನ್ ವಸ್ತ್ರ ಉರಿಯುತ್ತದೆ. ಆ ವೇಳೆ ಉರಿದ ಸ್ಥಳ ಕರಗಿ ಆ ಭಾಗ ಕೆಳಗೆ ಬಿದ್ದುಹೋಗುತ್ತದೆ. ಇದರಿಂದ ಸಾಮಾನ್ಯವಾಗಿ ಉರಿ ಹರಡಲು ಅವಕಾಶವಿಲ್ಲ. ಟೆರಿಲೀನ್ ಎಳೆಯ ಅಡ್ಡಕೊಯ್ತ ಚಕ್ರಾಕಾರದ್ದು. ಈ ಅಡ್ಡಕೊಯ್ತ ಪ್ರದೇಶದಲ್ಲಿ ಒಂದು ವರ್ಣದ್ರವ್ಯವಿರುತ್ತದೆ. ಉದ್ದುದ್ದವಾಗಿ ಕತ್ತರಿಸಿ ನೋಡಿದರೆ ನಯವಾಗಿಯೂ ಗೆರೆಗಳಿಲ್ಲದ ಹಾಗೂ ಕಾಣುತ್ತದೆ. ಟೆರಿಲೀನಿನ ನಯಮೇಲ್ಮೈ ಜಾಡು ಹಿಡಿಸದಂಥದ್ದು. ಅಂದರೆ, ಅಕಸ್ಮಾತ್ತಾಗಿ ಬೆಂಕಿ ತಗುಲಿದರೆ, ನಯಮೇಲ್ಮೈ ಮೇಲೆ ಯಾವುದೇ ತೆರನಾದ ಜಾಡು ಬೀಳುವುದಿಲ್ಲ. ಇತರ ವಸ್ತ್ರದ ಎಳೆಗಳಿಗೆ ಹೋಲಿಸಿ ನೋಡಿದರೆ ಟೆರಿಲೇನಿನ ಮೇಲೆ ಬಿಸಿಲಿನ ಪರಿಣಾಮ ಹೆಚ್ಚಿಲ್ಲವೆನ್ನಬಹುದು. ಅತಿನೇರಿಳೆ, ಕಿರಣಗಳನ್ನು ತಡೆಯುವ ಗುಣವುಳ್ಳ ಗಾಜಿನ ಹಿಂದೆ ಉಪಯೋಗಿಸಿದರೆ, ಇತರ ವಸ್ತ್ರದ ಎಳೆಗಳಿಗಿಂತ ಇದೇ ಹೆಚ್ಚು ಉಷ್ಣವನ್ನು ಹೀರಿಕೊಳ್ಳುತ್ತದೆ. ಇದರಿಂದಾಗಿ, ಇದನ್ನು ತೆರೆಗಳಿಗಾಗಿ ಹೆಚ್ಚಾಗಿ ಉಪಯೋಗಿಸುತ್ತಾರೆ.

	ಟೆರಿಲೀನ್ ವಸ್ತ್ರಗಳನ್ನು ಕಾವನ್ನು ಒದಗಿಸುವ ಕ್ರಮಗಳಿಂದ ಉದ್ದಗಲದಲ್ಲಿ ಸ್ಥಿರಗೊಳಿಸಬಹುದು; ಇಂಥ ಉಷ್ಣತೆಗಿಂತ ಕಡಿಮೆಯಿರುವ ಉಷ್ಣತೆಗಳಲ್ಲಿ ಜರಗುವ ಒಗೆತ ಇಲ್ಲವೆ ಒಣಚಲುವೆ ಮುಂತಾದ ಅನಂತರ ಸಂಸ್ಕರಣಗಳಿಂದ ಯಾವುದೇ ರೀತಿ ಇಂಥ ವಸ್ತ್ರಗಳು ಬಾಧಿತವಾಗದಿರುವಂತೆ ಈ ಕಾರ್ಯ ಸಾಧ್ಯವಾಗಿಸುತ್ತದೆ. ಟೆರಿಲೀನ್ ವಸ್ತ್ರಗಳ ಉಷ್ಣಧಾರಣೆಗೆ 220-2300 ಛಿ ಯಷ್ಟು ಉಷ್ಣತೆ ಅಗತ್ಯ; ಇಂಥ ವಸ್ತ್ರಗಳನ್ನು ಉಡುಪಾಗಿ ಉಪಯೋಗಿಸಬಹುದಲ್ಲದೆ ಅವನ್ನು ಇಸ್ತ್ರಿ ಕೂಡ ಮಾಡಬಹುದು. ಈ ವಸ್ತ್ರ ಒಂದು ಪಕ್ಷ ಉಷ್ಣಧಾರಿತವಾಗಿಲ್ಲದಿದ್ದರೆ, ಬಿಸಿನೀರಿನಲ್ಲಿ ಇಲ್ಲವೆ ಒಣಚಲುವೆಕಾರಿ ದ್ರಾವಣದಲ್ಲಿ ಅದ್ದಿದಾಗ ಅದು ಕುಗ್ಗುತ್ತದೆ; ಇದಲ್ಲದೆ. ಮನೆಯಲ್ಲಿ ಬಿಸಿನೀರಿನಲ್ಲಿ ಇದನ್ನು ಒಗೆಯುವಾಗ ಉಂಟಾಗುವ ಸುಕ್ಕುಗೆರೆಗಳನ್ನು ಹೋಗಲಾಡಿಸುವುದು ಕಷ್ಟ. ಆದ್ದರಿಂದ ಟೆರಿಲೀನ್ ವಸ್ತ್ರವನ್ನು ಉಡುಪಾಗಿ ಧರಿಸಬೇಕಾದರೆ ಅದು ಉಷ್ಣಧಾರಿತವಾಗಿರಬೇಕು. ಹೀಗಿದ್ದರೆ ಮಾತ್ರ ಉತ್ತಮ ಫಲಿತಾಂಶ ದೊರೆಯುತ್ತದೆ. ಉಷ್ಣಧಾರಿತ ಉಷ್ಣತೆಗಳಲ್ಲಿ ಮೇಲಂಗಿಯ ನೀರಿಗೆಗಳಂತೆ ಮಡಿಕೆಗಳು ಬರುವಂತೆಯೊ ಇಲ್ಲವೇ ಪ್ಯಾಂಟಿನಲ್ಲಿನ ಗೆರೆಗಳು ಬರುವಂತೆಯೊ ಮಾಡಿಸಿದಾಗ ಅವು ಶಾಶ್ವತವಾಗಿ ಉಳಿಯುತ್ತವೆ. ಮುಂದೆ ಒಗೆಯುವಾಗ ಇತರ ಯಾವುದೇ ಸುಕ್ಕು ಅಥವಾ ಗೆರೆಗಳು ಉಂಟಾದರೆ, ಅತಿ ಹಗುರವಾಗಿ ಇಸ್ತ್ರಿ ಮಾಡುವುದರಿಂದ ಅವನ್ನು ನಿವಾರಿಸಬಹುದು, ಚಲುವೆಕಾರಿ ಮತ್ತು ಇನ್ನಿತರ ಉತ್ಕರ್ಷಣಕಾರಿ ವಸ್ತುಗಳ ವಿರುದ್ಧ ಟೆರಿಲೀನಿಗೆ ಉತ್ತಮ ನಿರೋಧಕತ್ವವಿದೆ. ಹಲವಾರು ಖನಿಜಾಮ್ಲ ಮತ್ತು ದುರ್ಬಲ ಕ್ಷಾರಗಳ ವಿರುದ್ಧವೂ ಇದಕ್ಕೆ ಒಳ್ಳೆಯ ನಿರೋಧಕತ್ವ ಉಂಟು. ಇದನ್ನು ಪ್ರಬಲ ಕ್ಷಾರಗಳೊಂದಿಗೆ ಕುದಿಸಿದಾಗ ವಿಭಜನೆ ಹೊಂದುತ್ತದೆ. ಟೆರಿಲೀನಿಗೆ ಬಣ್ಣ ಹಾಕುವುದಕ್ಕೆ ಚಹರಿಸುವ, ಸ್ಫುಟಗೊಳಿಸಿದ ಮತ್ತು ಕೇಟ್-ಅಯಾನಿಕ್ ಬಣ್ಣಗಳನ್ನು ಒಂದು ವಾಹಕದ ಜೊತೆಯಾಗಲೀ ಇಲ್ಲವೆ ಹೆಚ್ಚಿನ ಉಷ್ಣತೆಯಲ್ಲಾಗಲೀ ಬಳಸುತ್ತಾರೆ.

	ಟೆರಿಲೀನ್ ವಸ್ತ್ರಗಳಿಗೆ ಅನ್ವಯಿಸುವ ಟೆರಿಲೀನ್ ಎಳೆಗಳ ಗುಣಲಕ್ಷಣಗಳನ್ನು ಹೀಗೆ ಸಂಕ್ಷೇಪಿಸಬಹುದು: 1 ಒದ್ದೆ ಇಲ್ಲವೆ ಒಣಗಿರುವ ಸ್ಥಿತಿಗಳಲ್ಲಿ ಉಂಟಾಗುವ ಸುಕ್ಕುಗಳಿಗೂ ಮಡಿಕೆಗಳಿಗೂ ನಿರೋಧವುಂಟುಮಾಡುವುದು ಹಾಗು ಅವುಗಳಿಂದ ವಿಮೋಚನೆ: 2 ಸ್ಟೇಪಲ್ ಎಳೆಯ ದಾರಗಳನ್ನು ಉಪಯೋಗಿಸದೆ ತಂತುದಾರಗಳನ್ನು ಉಪಯೋಗಿಸಿ ಚಾಚುವಾಗ ಒದಗುವ ಪರಿಣಾಮದ ವಿರುದ್ಧ ಇರುವ ಉಚ್ಚಮಟ್ಟದ ನಿರೋಧಕತ್ವ; 3 ಸವೆತದ ವಿರುದ್ಧ ಇರುವ ಉಚ್ಚಮಟ್ಟದ ನಿರೋಧಕತ್ವ: 4 ಉತ್ತಮ ರೂಪ ಹಾಗು ಹೊರಮೈರಚನಾ ವಿನ್ಯಾಸ; 5 ಉತ್ತಮ ರಸಾಯನಿಕ ನಿರೋಧಕತ್ವ; 6 ಗಾಜಿನ ಹಿಂದೆ (ಮನೆಯೊಳಗೆ) ಬಿಸಿಲಿನ ವಿರುದ್ಧ ಇರುವ ನಿರೋಧಕತ್ವ; 7 ಆಧಿಕ ಉಷ್ಣದ ವಿರುದ್ಧ ಇರುವ ನಿರೋಧಕತ್ವ ಮತ್ತು ಹೆಚ್ಚು ಕಾಲ ಬಾಳಿಕೆ.

	ಉಪಯೋಗಗಳು: ಟೆರಿಲೀನಿನ ವಿಶಿಷ್ಟ ಗುಣಲಕ್ಷಣಗಳಿಂದಾಗಿ, ಅದನ್ನು ಸಿದ್ಧಪಡಿಸಿದ ಉಡುಪು, ಮಕ್ಕಳ ಲಂಗ, ಉಷ್ಣವಲಯದ ಪೋಷಾಕುಗಳು, 55% ಟೆರಿಲೀನ್, 45% ಉಣ್ಣೆ ಮಿಶ್ರಿತ ಪೋಷಾಕುಬಟ್ಟೆಗಳು-ಮುಂತಾದವನ್ನು ತಯಾರಿಸಲು ಬಳಸುವುದಿದೆ. ಲಿನೋ ನೇಯ್ಗೆಯನ್ನು ಬಳಸಿ ಟೆರಿಲೀನ್ ಬಲೆಗಳನ್ನು ತಯಾರಿಸಬಹುದು. ಹೀಗೆ ತಯಾರಿಸದ ಪರದೆಗಳು ಹೆಚ್ಚು ಜನ ಪ್ರಿಯವಾಗಿವೆ.

	ಮಹಿಳೆಯರ ಒಳ ಉಡುಪುಗಳಿಗೂ ಟೆರಿಲೀನನ್ನು ಬಳಸಬಹುದು. ಕಾರಣ ಅದು ಬೆಚ್ಚಗಿರುವುದಲ್ಲದೆ ಅದನ್ನು ಅಗತ್ಯವಿದ್ದಷ್ಟು ಸಲ ಒಗೆಯಲೂಬಹುದು. ರವಿಕೆ ಬಟ್ಟೆಗಳಲ್ಲಿಯೂ ಟೆರಿಲೀನಿನ ಬಳಕೆ ಉಂಟು, ಏಕೆಂದರೆ ಅದು ಹೆಚ್ಚು ತೂಕದ ರೇಷ್ಮೆಯಂತೆ ಚಂದದ ನೆರಿಗೆಗಳನ್ನು ಬರಿಸುತ್ತದೆ. ಅದನ್ನು ಹತ್ತಿಯ ಬಟ್ಟೆಯಂತೆ ಒಗೆಯಬಹುದು. ಬಹಳ ಕಾಲ ತೊಟ್ಟರೂ ಟೆರಿಲೀನ್ ವಸ್ತ್ರ ಹಳದಿ ಬಣ್ಣಕ್ಕೆ ತಿರುಗುವುದಾಗಲೀ ಮಾಸಿದಂತೆ ಕಾಣುವುದಾಗಲೀ ಇಲ್ಲ. ಇದರಿಂದ ಟೆರಿಲೀನ್ ವಸ್ತ್ರಗಳು ಬಹುಕಾಲ ಬಾಳಿಕೆ ಬರುತ್ತವೆ. ಪಟ್ಟಣವಾಸಿಗಳು ತೊಡುವ ಕಾಲುಚೀಲಗಳನ್ನು ಟೆರಿಲೀನಿನ ಸ್ಟೇಪಲ್ ಎಳೆದಾರಗಳಿಂದ ತಯಾರಿಸುತ್ತಾರೆ. ಇಂಥ ದಾರವನ್ನು ಜಮಕಾನೆಗಳಲ್ಲಿ ಮೇಲ್ಮೈದಾರವನ್ನಾಗಿ ಉಪಯೋಗಿಸುವುದೂ ಉಂಟು. ಟೆರಿಲೀನಿನಿಂದ ತಯಾರಿಸಿದ ಗಂಡಸರ ಕೊರಳಪಟ್ಟಿಗಳನ್ನು (ನೆಕ್ ಟೈ) ಶುಚಿಗೊಳಿಸುವುದು ಸುಲಭ.

	ಟೆರಿಲೀನಿನ ಕೈಗಾರಿಕಾ ಉಪಯೋಗಗಳು: ಬಟ್ಟೆಗಳನ್ನು ಚಲುವೆಮಾಡುವುದರಲ್ಲಿನ ಟೆರಿಲೀನಿನ ಬಳಕೆ ಕ್ಯಾಲೆಂಡರ್ ಷೀಟಿಂಗ್, ಪ್ಯಾಕಿಂಗ್ ಪ್ಲ್ಯಾನಲ್, ನಿಟ್ಟೆಡ್ ಪ್ಯಾಡಿಂಗ್, ಲಾಂಡ್ರಿ, ಕಂಬಳಿ ಮೆರಗು ಕೊಟ್ಟ ಶಿರಸ್ತ್ರಾಣ ಹೊದಿಕೆಗಳು ಮತ್ತು ಲಾಂಡ್ರಿ ಚೀಲಗಳು-ಹೀಗೆ ವಿವಿಧ ಬಗೆಗಳಲ್ಲಿ ಉಂಟು, ಇಲ್ಲಿ ಪ್ರಮುಖವಾಗಿ ನಾವು ಕಾಣುವುದು ಅದರ ದೀರ್ಘ ಬಾಳಿಕೆಯ ಗುಣ ಮತ್ತು ಉಷ್ಣಧಾರಿತ ಹಾಗು ಕಠಿಣಬಳಕೆಯನ್ನು ಸೈರಿಸುವ ಸಾಮಥ್ರ್ಯಗಳು. ಕಾಲುಚೀಲಗಳಿಗೆ ಬಣ್ಣಹಾಕುವ ಕೈಗಾರಿಕೆಗಳಲ್ಲಿ ನೈಲಾನ್ ಕಾಲುಚೀಲಗಳಿಗೆ ಬಣ್ಣವನ್ನು ಹಾಕಲು ಟೆರಿಲೀನ್ ಚೀಲಗಳ ಉಪಯೋಗ ಇದೆ. ಏಕೆಂದರೆ, ನೈಲಾನಿಗೆ ಉಪಯೋಗಿಸುವಂಥ ಬಣ್ಣಗಳು ಟೆರಿಲೀನಿಗೆ ಅಂಟುವುದಿಲ್ಲ. ಕಾಗದದ ಕಾರ್ಖಾನೆಯಲ್ಲೂ ಟೆರಿಲೀನಿನ ಉಪಯೋಗ ಉಂಟು. ಅಂತಿಮ ಘಟ್ಟದಲ್ಲಿ ಕಾಗದವನ್ನು ಒಣಗಿಸುವಾಗ ಕಾದ ಸಿಲಿಂಡರುಗಳ ಮೇಲೆ ಕಾಗದದ ಜಾಲವನ್ನು ಹಾಯಿಸುವುದರಲ್ಲಿ ನೇಯ್ದ ಫೆಲ್ಟಿನ ರೂಪದಲ್ಲಿ ಟೆರಿಲೀನಿನ ಬಳಕೆ ಇದೆ. ಈ ಕೈಗಾರಿಕೆಯಲ್ಲಿ ಬಳಸುವ ಟೆರಿಲೀನ್ ಫೆಲ್ಟು ಮತ್ತಾವುದೇ ಫೆಲ್ಟುಗಳಿಗಿಂತ ಸುಮಾರು 5 ರಷ್ಟು ಹೆಚ್ಚು ಬಾಳಿಕೆ ಬರುತ್ತದೆ. ಟೆರಿಲೀನಿನಿಂದ ಭದ್ರಪಡಿಸಿದ ರಬ್ಬರಿನ ವಾಹಕಪಟ್ಟಿಗಳ (ಬೆಲ್ಟ್) ಉಪಯೋಗ ರಾಸಾಯನಿಕ ಕಾರ್ಖಾನೆಗಳಲ್ಲಿ ಉಂಟು. ಇದಕ್ಕೆ ಕಾರಣ ಅದರ ರಾಸಾಯನಿಕರೋಧತೆ, ಉಷ್ಣ ರೋಧತೆ, ಸವೆತ ನಿರೋಧತೆ ಮತ್ತು ಹೆಚ್ಚಿನ ಸಾಮಥ್ರ್ಯ-ಇವುಗಳಿಂದಾಗಿ ಟೆರಿಲೀನ್ ಬಟ್ಟೆಗಳು ಹೆಚ್ಚಿಗೆ ಬಾಳಿಕೆ ಬರುತ್ತವೆ. ವಿದ್ಯುತ್ ಕೈಗಾರಿಕೆಗಳಲ್ಲೂ ಟೆರಿಲೀನನ್ನು ಉಪಯೋಗಿಸುತ್ತಾರೆ. ಅಧಿಕ ಉಷ್ಣತೆಗಳನ್ನು ತಡೆದುಕೊಳ್ಳುವ ಸಾಮಥ್ರ್ಯವಿರುವುದರಿಂದ ಇದನ್ನು ವಿದ್ಯುದ್ರೋಧಕವನ್ನಾಗಿ ಬಳಸುತ್ತಾರೆ. ಇದನ್ನು ಇ-ವರ್ಗದ ವಿದ್ಯುದ್ರೋಧಕಗಳಲ್ಲಿ (ಅಂದರೆ 1200 ಛಿ ಉಷ್ಣತೆಯವರೆಗೆ ಉಪಯೋಗಿಸುವಂಥದು) ಸೇರಿಸಿದ್ದಾರೆ. ಅಧಿಕ ವಿದ್ಯುತ್ ಸಾಮಥ್ರ್ಯದ ವ್ಯವಸ್ಥೆಗಳಲ್ಲಿ. ನೇರ ಇಲ್ಲವೆ ಅಭಿನತ ರೀತ್ಯದ ವಿದ್ಯುದ್ರೋಧಕ ಟೇಪುಗಳ ರೂಪದಲ್ಲಿ ಅಧಿಕ ಸಾಮಥ್ರ್ಯದ, ಸಾಮಾನ್ಯ ಬಳಕೆಯ ವಿದ್ಯುತ್ ಮೋಟರುಗಳಲ್ಲಿ ಟೆರಿಲೀನನ್ನು ಬಳಸುತ್ತಾರೆ. ಈ ಪಟ್ಟಿಗಳನ್ನು ವಾರ್ನಿಷ್ ಮಾಡುವಾಗ ಉಪಯೋಗಿಸುವ ಉಷ್ಣತೆಗೆ ತಕ್ಕುದಾದ ಉದ್ದಗಲ ಸ್ಥಿರತೆಯನ್ನು ಪಡೆಯಲು ಪೂರ್ವಭಾವಿಯಾಗಿ 2200 ಛಿ ಉಷ್ಣತೆಯಲ್ಲಿ ಉಷ್ಣಧರಿಸುವಂತೆ ಮಾಡಿರಲಾಗಿರುತ್ತದೆ. ಹೊದಿಕೆ ರಹಿತ ವಿದ್ಯುತ್ ತಂತಿಗಳ ಮೇಲೆ ಹೊದಿಕೆಯಾಗಿ ಟೆರಿಲೀನ್ ತಂತುದಾರವನ್ನು ಬಳಸುತ್ತಾರೆ. ವಿದ್ಯುತ್ ಕೋಶಗಳ ವಾಹಕಾಗ್ರಗಳಿಗೆ (ಬ್ಯಾಟರಿ ಲೀಡ್ಸ್) ಟೆರಿಲೀನಿನಿಂದ ಹೆಣೆದ ಹೊದಿಕೆ ಇರುತ್ತದೆ. ಅಗ್ನಿಶಮನಕ್ಕಾಗಿ ಬಳಸುವ ನೀರು ಹಾಯಿಸುವ ಕೊಳವೆಗಳನ್ನು ತಯಾರಿಸುವಲ್ಲಿ (ಒಳಹೊದಿಕೆ P.ಗಿ.ಅ. ಆಥವಾ ರಬ್ಬರ್ ಇರಬಹುದು) ಅಧಿಕ ಸಾಮಥ್ರ್ಯ, ಅಧಿಕ ನಿಯತಾಂಕ ಕಡಿಮೆ ಸೆಳೆತ ಹಾಗೂ ತೇವವನ್ನು ಹೀರುವ ಅಲ್ಪಸಾಮಥ್ರ್ಯ-ಮುಂತಾದ ಗುಣಗಳಿರುವ ಅಧಿಕ ದೃಢತೆಯ ಟೆರಿಲೀನನ್ನು ಉಪಯೋಗಿಸುತ್ತಾರೆ.

	ಟೆರಿಲೀನಿನ ಅಧಿಕ ತ್ರಾಣ ನಮ್ಯತೆ, ದೀರ್ಘ ಬಾಳಿಕೆ, ಸಮುದ್ರದ ನೀರು, ಬಿಸಿಲು ಉಷ್ಣ ಹಾಗು ಸೂಕ್ಷಾಣುಜೀವಿಗಳಿಂದ ಅಬಾಧಿತವಾಗಿರುವುದು ಈ ಕಾರಣಗಳಿಂದಾಗಿ ಇದನ್ನು ಮೀನುಬಲೆ ಹಾಯಿಬಟ್ಟೆ, ಹಗ್ಗ ಮುಂತಾದ ವಸ್ತುಗಳನ್ನು ತಯಾರಿಸುವುದಕ್ಕೂ ಉಪಯೋಗಿಸುತ್ತಾರೆ. ಟೆರಿಲೀನಿನ ಮೀನು ಬಲೆಗಳು ಉತ್ಕøಷ್ಟವಾಗಿರುವುವು. ಇವು ಉಪಯೋಗಿಸಲು ಸುಲಭ. ಜೊತೆಗೆ ಹಗುರವಾಗಿಯೂ ಗಟ್ಟಿಮುಟ್ಟಾಗಿಯೂ ದೀರ್ಘಬಾಳಿಕೆ ಬರುವಂಥವೂ ಹೌದು. ಹತ್ತಿಯಿಂದ ಮಾಡಿದ ಹಾಯಿಬಟ್ಟೆಗಿಂತ ಟೆರಿಲೀನಿನ ಹಾಯಿಬಟ್ಟೆ ಹೆಚ್ಚು ಹಗುರವಾಗಿರುವುದರಿಂದ, ವಿನೋದಕ್ಕಾಗಿ ವಿಹರಿಸುವ ದೋಣಿಗಾರರು ಇದನ್ನು ಬಳಸುತ್ತಾರೆ. ಟೆರಿಲೀನಿನಿಂದ ತಯಾರಿಸಿದ ಗುಡಾರ ಬಟ್ಟೆ (ಕ್ಯಾನ್‍ವಾಸ್), ಪ್ರಾಣರಕ್ಷಕ ದೋಣಿಯ ಹೊದಿಕೆಗಳು ಹಾಗೂ ವಿನೋದ ವಿಹಾರದ ದೋಣಿಯ ಹೊದಿಕೆ ಮುಂತಾದವು ತೈಲೇಂಧನದಿಂದ ಚಲಿಸುವ ಹಡುಗುಗಳಲ್ಲಿ ಬಳಸುವ ಸಾಧಾರಣ ಕ್ಯಾನವಾಸ್‍ಗಿಂತ ಹೆಚ್ಚು ತಕ್ಕದ್ದಾಗಿರುತ್ತವೆ. ಟೆರಿಲೀನ್ ವಸ್ತ್ರದ ಹಗುರತನ, ಇನ್ನಿತರೆ ವಸ್ತ್ರಗಳಿಗಿಂತ ಹೆಚ್ಚು ಬಾಳಿಕೆ ಇರುವ ಅದರ ಗುಣ-ಇವುಗಳಿಂದಾಗಿ ಟಾರ್ಪಾಲಿನ್‍ಗಳ ತಯಾರಿಕೆಯಲ್ಲಿ ಅದನ್ನು ಮೂಲವಸ್ತ್ರವಾಗಿ ಬಳಸಲಾಗಿದೆ. ರಾಸಾಯನಿಕ ಆಮ್ಲಗಳ ಬಳಕೆ ಇರುವ ಸ್ಥಾವರಗಳಲ್ಲಿ ಕೆಲಸಮಾಡುವ ಜನ ಟೆರಿಲೀನಿನಿಂದ ತಯಾರಾದ ರಕ್ಷಣಾ ಕವಚಗಳನ್ನು ತೊಟ್ಟಿರುತ್ತಾರೆ. ಇದಕ್ಕೆ ಅದರ ರಾಸಾಯನಿಕ ನಿರೋಧಕವೇ ಗುಣವೇ ಕಾರಣ. ಸಾಧಾರಣ ಹಗ್ಗಕ್ಕಿಂತ ಟೆರಿಲೀನಿನಿಂದ ತಯಾರಿಸಿದ ಹಗ್ಗ 15 ಪಟ್ಟು ಹೆಚ್ಚು ಬಾಳಿಕೆ ಬರುತ್ತದೆ. ಇಂಥದನ್ನು ಜಗ್ಗು, ಲಂಗರು, ನಾವೆಯ ಪಟಸ್ಥಂಭ ಕಟ್ಟುವ ಹಗ್ಗ ಮತ್ತು ವಿನೋದ ವಿಹಾರದ ನಾವೆಯ ಹಗ್ಗಗಳಿಗೂ ಬಳಸುತ್ತಾರೆ. ಟೆರಿಲೀನ್ ಹಗ್ಗ ಮನಿಲಾ ಹಗ್ಗಕ್ಕಿಂತ ಹೆಚ್ಚು ನಯವಾದುದರಿಂದ ಹೆಚ್ಚು ಜಾರುವಂಥದು. ಇದು ನೈಲಾನ್ ಹಗ್ಗಕ್ಕಿಂತ 2ರಷ್ಟು ಬಾಳಿಕೆ ಬರುತ್ತದೆ. ಇದಕ್ಕೆ ಇದರ ಅಲ್ಪ ಸೆಳೆತವೇ ಕಾರಣ. ಈ ಗುಣದಿಂದಾಗಿ ಹಗ್ಗದಲ್ಲಿ ಅಂತರ ಎಳೆತ ಘರ್ಷಣೆ ಕಡಿಮೆಯಾಗುತ್ತದೆ. ತವರ-ನಿಕ್ಕಲ್ ವಿದ್ಯುಲ್ಲೇಪನ ಮಾಡುವ ಧನಾಗ್ರಗಳಿಗೆ ಟೆರಿಲೀನನ್ನು ಮುಖ್ಯವಾಗಿ ಬಳಸುತ್ತಾರೆ. ವಿದ್ಯುತ್ ವಿಶ್ಲೇಷ್ಯವಾಗಿರುವ ಹೈಡ್ರೋಫ್ಲೂರಿಕ್ ಆಮ್ಲ ಟರಿಲೀನಿನ ಮೇಲೆ ಯಾವ ಪರಿಣಾಮವನ್ನು ಉಂಟುಮಾಡದಿರುವುದೆ ಇದಕ್ಕೆ ಕಾರಣ. ಸೂಕ್ಷಾಣುಜೀವಿಗಳ ವಿರುದ್ಧ ನಿರೋಧಕತ್ವಗುಣವುಳ್ಳ ಟೆರಿಲೀನನ್ನು ನೀರನ್ನು ಶೋಧಿಸುವ ಕೆಲಸದಲ್ಲೂ ಉಪಯೋಗಿಸುವುದುಂಟು.

	ಇತರ ಎಳೆಗಳೊಡನೆ ಟೆರಿಲೀನಿನ ಸಂಯೋಜನೆ: ಸ್ಟೇಪಲ್ ರೂಪದಲ್ಲಿ ಟೆರಿಲೀನನ್ನು ಉಣ್ಣೆ, ವಿಸ್ಕೋಸ್ ರೇಯಾನ್ ಸ್ಟೇಪಲ್ ಅಥವಾ ಸೆಲ್ಯುಲೋಸ್ ಅಸಿಟೇಟ್ ಸ್ಟೇಪಲಿನೊಂದಿಗೆ ಸಂಯೋಜಿಸುವುದೇ ಟೆರಿಲೀನಿನ ಪ್ರಮುಖ ಉಪಯುಕ್ತತೆಗಳಲ್ಲಿ ಒಂದಾಗಿದೆ. ಇಂಥ ಸಂಯೋಜನೆಗಳ ವೈಶಿಷ್ಟ್ಯವೆಂದರೆ ಉರಿಯುತ್ತಿರುವ ಸಿಗರೇಟಿನ ಬೆಂಕಿ ಅಕಸ್ಮಾತ್ ಇಂಥ ದಾರಗಳ ಮೇಲೆ ಬಿದ್ದರೆ ಇವು ತೂತಾಗುವುದಕ್ಕೆ ಸಾಧ್ಯವಾದಷ್ಟು ಅವಕಾಶವೀಯದಿರುವುದು. 55% ಟೆರಿಲೀನ್, 45% ಉಣ್ಣೆ-ಈ ಸಂಯೋಜನೆಯನ್ನು ಉಷ್ಣವಲಯದ ಪೋಷಾಕಿನಲ್ಲಿ ಬಳಸುವುದು ಹೆಚ್ಚಾಗುತ್ತಿದೆ. ಟೆರಿಲೀನ್ ಸ್ಟೇಪಲನ್ನು ಈಜಿಪ್ಷಿಯನ್ ಹತ್ತಿಯೊಂದಿಗೆ 2:1 ಪ್ರಮಾಣದಲ್ಲಿ ಸಂಯೋಜಿಸಿದರೆ, ಸಂಯೋಜನೆಯಲ್ಲಿರುವ ಹತ್ತಿ ಒಂದು ಬಗೆಯ ಅಪಾರದರ್ಶಕತೆಯನ್ನು ಪ್ರದರ್ಶಿಸುತ್ತದೆ. ಈ ಗುಣ ರವಿಕೆಗಳಲ್ಲೂ ಶರಟುಗಳಲ್ಲೂ ಅಪೇಕ್ಷಣೀಯ; ಇಂಥ ವಸ್ತ್ರದಲ್ಲಿರುವ ಹತ್ತಿಯ ಅಂಶ ತೇವವನ್ನು ಹೆಚ್ಚಾಗಿ ಹೀರಿಕೊಳ್ಳುತ್ತದೆ. ಟೆರಿಲೀನ್ ಬಟ್ಟೆಯನ್ನು ಬಳಸುವುದು ಬಹಳ ಅನುಕೂಲ.
(ಡಿ.ವಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ